ಏಡ್ರಿಯಾಟಿಕ್ ಕಡಲು: ಮೆಡಿಟರೇನಿಯನ್ ಸಮುದ್ರದ ಒಂದು ಕವಲು. ಇಟಲಿ, ಬಾಲ್ಕನ್ ಪರ್ಯಾಯದ್ವೀಪ-ಇವುಗಳ ನಡುವೆ ಇದೆ. ಉತ್ತರ ಅಕ್ಷಾಂಶ 400 ಯಿಂದ 450 41‘ ವರೆಗೆ-800 ಕಿಮೀ ಉದ್ದಕ್ಕೆ-ಹಬ್ಬಿದೆ. ಇದರ ಅಗಲ 72ರಿಂದ 225 ಕಿಮೀ (ಸರಾಸರಿ 175 ಕಿಮೀ) ವಿಸ್ತೀರ್ಣ ಸುಮಾರು 60,000 ಚ. ಮೈ. ಇಡೀ ಮೆಡಿಟರೇನಿಯನಿನಲ್ಲಿ ಇದು ಅತ್ಯಂತ ಕಿರಿ ಆಳದ ಜಲಪ್ರದೇಶ. ಉತ್ತರಾರ್ಧದಲ್ಲಿ ಇದರ ಆಳ ಇನ್ನೂ ಕಡಿಮೆಯಾಗುತ್ತ ಹೋಗುತ್ತವೆ. ಈ ಕಡಲಿನ ಅತಿ ಹೆಚ್ಚಿನ ಆಳವೆಂದರೆ 1220 ಮೀ ಇದರ ನೀರಿನ ಲವಣತ್ವ ಪ್ರತಿ ಸಾವಿರಕ್ಕೆ 18ರಿಂದ 35ರವರೆಗೆ ವ್ಯತ್ಯಾಸವಾಗುತ್ತದೆ.

ರೋಮನ್ನರ ಕಾಲದಲ್ಲಿ ಈ ಕಡಲ ದಂಡೆಯ ಏಡ್ರಿಯ ಎಂಬ ಬಂದರು ಬಲು ಪ್ರಸಿದ್ಧವಾಗಿತ್ತು. ಅದರಿಂದಲೇ ಈ ಕಡಲಿಗೆ ಏಡ್ರಿಯಾಟಿಕ್ ಎಂಬ ಹೆಸರು ಬಂದಿದೆ. ಈ ಬಂದರು ಕಡಲಂಚಿನಿಂದ ಒಳನಾಡಿನಲ್ಲಿ 22.5 ಮೀ ದೂರದಲ್ಲಿದೆ. ಆಲ್ಪ್‌್ಸ ಮತ್ತು ಅಪೆನೈನ್ ಪರ್ವತಗಳಿಂದ ಹರಿದು ಬಂದು ಈ ಕಡಲನ್ನು ಸೇರುವ ನದಿಗಳು ಸತತವಾಗಿ ಮಣ್ಣನ್ನು ತಂದು ಇದರಲ್ಲಿ ತುಂಬುತ್ತಲೇ ಇರುವುದರಿಂದ ಈ ನದಿಗಳ ಮುಖಜಭೂಮಿ ಸಮುದ್ರದ ಕಡೆಗೆ ಇಂದಿಗೂ ಬೆಳೆಯುತ್ತಲೇ ಇದೆ. ಕೆಲವು ಕಡೆಗಳಲ್ಲಿ ವರ್ಷಕ್ಕೆ 9 ಮೀಗಳಂತೆ ಸಮುದ್ರ ಹಿಂದೆ ಸರಿಯುತ್ತಿದೆ.

ಏಡ್ರಿಯಾಟಿಕಿನಲ್ಲಿ ಸ್ಥೂಲವಾಗಿ ಮೆಡಿಟರೇನಿಯನ್ ವಾಯುಗುಣವಿದೆಯೆನ್ನ ಬಹುದಾದರೂ ಇದರ ಉತ್ತರದ ಕಡೆಯಲ್ಲಿ ಖಂಡಾಂತರ ವಾಯುಗುಣದ ಲಕ್ಷಣಗಳೂ ಉಂಟು. ಈ ಕಡಲಿನ ಇಟಲಿಯ ಕಡೆಯ ದಂಡೆಗೂ ಬಾಲ್ಕನ್ ದಂಡೆಗೂ ನಡುವೆ ಹಲವು ವ್ಯತ್ಯಾಸಗಳನ್ನು ಕಾಣಬಹುದು. ಇಟಾಲಿಯನ್ ಕರಾವಳಿ ಹೆಚ್ಚು ನೇರ; ಇಲ್ಲಿ ಜೌಗು ಸಾಮಾನ್ಯ. ಬಾಲ್ಕನ್ ತೀರ ಅಂಕುಡೊಂಕು; ಕಡಿದು, ಬಂಡೆಮಯ. ಇಟಲಿಯ ಕಡೆಯಲ್ಲಿ ನೈಸರ್ಗಿಕ ಬಂದರು ಇಲ್ಲವೇ ಇಲ್ಲವೆನ್ನಬಹುದು. ಇಟಲಿಯ ತೀರದ ನಡುಗಡ್ಡೆಯಲ್ಲಿ, ಸುಣ್ಣಕಲ್ಲಿನ ಬಂಡೆಯ ಭೂಶಿರದ ರಕ್ಷೆಯಲ್ಲಿರುವ ಆಂಕೋನ ಬಂದರಿನಿಂದಾಚೆಗೆ ಮತ್ತೆ ಈ ಬಗೆಯ ಬಂಡೆಗಲ್ಲಿನ ತೀರ ಸಿಕ್ಕುವುದು ಟ್ರಿಯೆಸ್ಟೆ ಬಂದರಿನ ಬಳಿಯಲ್ಲೆ.

ಈ ಕಡಲಿನ ಇಟಾಲಿಯನ್ ತೀರದಲ್ಲಿ ಒಳ್ಳೆಯ ಬಂದರುಗಳೂ ಇದರ ತೀರಪ್ರದೇಶದಿಂದ ಒಳನಾಡಿಗೆ ನೈಸರ್ಗಿಕ ಭೂಮಾರ್ಗಗಳೂ ಇಲ್ಲವಾದರೂ ಈ ಕಡಲು ಮಧ್ಯ ಯುರೋಪಿನ ವಕ್ಷಸ್ಥಲದವರೆಗೂ ಚಾಚಿ ನಿಂತಿರುವುದರಿಂದ ಇದರ ಪ್ರಾಮುಖ್ಯ ಬಹಳ ಹೆಚ್ಚು. ಇದು ಐರೋಪ್ಯ ವ್ಯಾಪಾರದ ರಾಜಮಾರ್ಗ. ರೋಮನರ ಕಾಲದಿಂದಲೂ ಇಲ್ಲಿನ ಹಲವು ಬಂದರುಗಳು ವ್ಯಾಪಾರ ಕೇಂದ್ರಗಳಾಗಿವೆ. ವೆನಿಸಿನ ಬೆಳೆವಣಿಗೆಯಾದಾಗ ಏಡ್ರಿಯಾಟಿಕ್ ಮಾರ್ಗಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಬಂತು. ಸೂಯೆeóï ಕಾಲುವೆಯ ನಿರ್ಮಾಣದಿಂದ ವೆನಿಸ್ ಟ್ರಿಯೆಸ್ಟೆಗಳ ವ್ಯಾಪಾರ ಹೆಚ್ಚಿತು. ಇಂದು ಇವೆರಡು ಬಂದರುಗಳ ಪೈಕಿ ಟ್ರಿಯೆಸ್ಟೆಯದು ಸಿಂಹಪಾಲು. ಲಂಬರ್ಡಿ ಮೈದಾನದ ಆಯಾತ-ನಿರ್ಯಾತಗಳಿಗೆ ವೆನಿಸ್ ಇಂದಿಗೂ ಹೆಬ್ಬಾಗಿಲು. ಈ ಎರಡರ ಜೊತೆಗೆ ಆಂಕೋನ, ಬ್ರಿಂಡಿಸಿ, ರಿಯೆಕ ಮತ್ತು ಡೂಬ್ರೊವ್ನಿಕ್ ಬಂದರುಗಳೂ ಈ ಕಡಲ ಮಾರ್ಗದ ವ್ಯಾಪಾರದಲ್ಲಿ ಪಾಲ್ಗೊಂಡಿವೆ. ಏಡ್ರಿಯಾಟಿಕಿನ ಪುರ್ವ ಪಶ್ಚಿಮ ದಂಡೆಗಳ ಜನರಿಗೆ ಮೀನುಗಾರಿಕೆ ಒಂದು ಮುಖ್ಯ ಕಸಬು.               (ಎಂ.ಎ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ